ಕನ್ನಡ ಸಂಘ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯ ಮಂಗಳೂರು,ಸುರತ್ಕಲ್ ಯಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ), ಮಂಗಳೂರಿನ ತುಳು ಪರಿಷತ್, ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ಸಂಸ್ಥೆಗಳ ಸಹಯೋಗದಲ್ಲಿ ದಿನಾಂಕ 26-10-2023ರಂದು ಮಂಗಳೂರಿನ ರೋಶನಿ ನಿಲಯದ ಮರಿಯಾ ಪೈವಾ ಸಭಾಂಗಣದಲ್ಲಿ ಇಂದಿರಾ ಹೆಗ್ಗಡೆ ಅವರ ಸಾಹಿತ್ಯಾವಲೋಕನ ‘ನೆಲ ಮೂಲದ ನಡೆ : ಶೋಧ-ಸ್ವಾದ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಇಂದಿರಾ ಹೆಗ್ಗಡೆ ಅವರ ‘ಅತಿಕಾರೆ’ ಕೃತಿ ಬಿಡುಗಡೆ ಮಾಡಿದ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ದೇವರಕೊಂಡಾ ರೆಡ್ಡಿರವರು ಮಾತನಾಡುತ್ತಾ “ಹಲವು ಕಡೆಗಳ ಸಾಂಸ್ಕೃತಿಕ ಪ್ರಭಾವ ಆಗಿದ್ದರೂ ತುಳುವರು ಮತ್ತು ತುಳು ಸಂಸ್ಕೃತಿ ನಲುಗಲಿಲ್ಲ. ಇದು ಈ ನೆಲದ ವಿಶಿಷ್ಟ ಗುಣವಾಗಿದ್ದು ಸಾಂಸ್ಕೃತಿಕ ಅಧ್ಯಯನದಲ್ಲಿ ಮಹತ್ವ ಗಳಿಸಿದೆ.ಇಲ್ಲಿ ಬಹುಸಂಸ್ಕೃತಿಗಳು ಇದ್ದರೂ ತುಳುವಿನ ಪ್ರಭಾವ ಕುಗ್ಗಿಸಲು ಯಾವುದಕ್ಕೂ ಸಾಧ್ಯವಾಗಲಿಲ್ಲ. ತುಳುನಾಡಿನ ಸಂಶೋಧಕರ ಸಾಲಿಗೆ ಸೇರುವವರು ಇಂದಿರಾ ಹೆಗ್ಗಡೆ” ಎಂದು ಅವರು ಬಣ್ಣಿಸಿದರು.
ಲೇಖಕಿ ಇಂದಿರಾ ಹೆಗ್ಗಡೆಯವರು ಮಾತನಾಡಿ “ನನ್ನ ಎಲ್ಲಾ ಕೃತಿಗಳನ್ನು- ಸಣ್ಣ ಕಥೆ, ಕಾದಂಬರಿ, ಜೀವನ ಚರಿತ್ರೆ, ಕಾವ್ಯ, ಹಾಗೂ ಸಂಶೋಧನಾ ಕೃತಿಗಳನ್ನು ಯುವ ಬರಹಗಾರರಿಗೆ ತಲುಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ " ಎಂದರು.
ಆರಂಭದಿಂದ ಕೊನೆಯವರೆಗೂ ಸಭಾಂಗಣ ತುಂಬಿ ತುಳುಕುತ್ತಿತ್ತು,ಸಂಜೆ ಲೇಖಕಿಯೊಂದಿಗೆ ಸಂವಾದ ನಡೆಯಿತು.
ಪೂರ್ವಾಹ್ನದ ವಿಚಾರಗೋಷ್ಠಿಯಲ್ಲಿ ಡಾ. ಬಿ ಶಿವರಾಮ ಶೆಟ್ಟಿ, ಜಾನಕಿ ಬ್ರಹ್ಮಾವರ, ಡಾ.ರೇಖಾ ಬನ್ನಾಡಿ ಭಾಗವಹಿಸಿದ್ದರೆ, ಅಪರಾಹ್ನದ ಸಂವಾದದಲ್ಲಿ ಬರಹಗಾರರಾದ ಅಶ್ವಿನಿ ಶೆಟ್ಟಿ, ಉಷಾ ಕಟ್ಟೆಮನೆ, ರಘು ಇಡ್ಕಿದು, ವೀಣಾ ಶೆಟ್ಟಿ ಪಾಲ್ಗೊಂಡರು.
ರೋಶನಿ ನಿಲಯ ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಪ್ರೊ.ವಿನಿತಾ ಕೆ. ಅವರು ಇಂದಿರಾ ಹೆಗ್ಗಡೆ ಅವರ ‘ತುಳುನಾಡು ಸಂಸ್ಕೃತಿ ಸಮೀಕ್ಷೆ’ ಕೃತಿ ಬಿಡುಗಡೆ ಮಾಡಿದರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳ್ಯಾರು ಮತ್ತು ತುಳು ಪರಿಷತ್ತಿನ ಗೌರವಾಧ್ಯಕ್ಷ ಪ್ರಭಾಕರ ನೀರುಮಾರ್ಗ ಮಾತನಾಡಿದರು. ಆಕೃತಿ ಆಶಯ ಪಬ್ಲಿಕೇಷನ್ಸ್ ನ ಕಲ್ಲೂರು ನಾಗೇಶ, ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಪ್ರೊ. ಪಿ.ಕೃಷ್ಣಮೂರ್ತಿ, ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಓಬನಾಥ್ ಉಪಸ್ಥಿತರಿದ್ದರು.
ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಪುಸ್ತಕದ ಕುರಿತಂತೆ ಮಾಹಿತಿ ನೀಡಿದರು. ಯಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಪ್ರೊ. ಪಿ. ಕೃಷ್ಣಮೂರ್ತಿ ಸ್ವಾಗತಿಸಿ, ಆಕೃತಿ ಆಶಯ ಪಬ್ಲಿಕೇಶನ್ಸ್ ನ ಕಲ್ಲೂರು ನಾಗೇಶ ವಂದಿಸಿ, ಲೇಖಕಿ ಡಾ. ಸುಲತಾ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಶ್ರೀ ಓಬನಾಥ್ ಧನ್ಯವಾದ ಸಲ್ಲಿಸಿದರು.
ಈ ವಿಚಾರ ಸಂಕಿರಣದಲ್ಲಿ ವಿವಿಧ ಕಾಲೇಜಿನ 60 ವಿದ್ಯಾರ್ಥಿಗಳು ಹಾಗೂ 88 ಸಾಹಿತ್ಯಾಸಕ್ತರು ಭಾಗವಹಿಸಿದ್ದರು.